2024 moscow Crocus City Hall Attack on Concert Hall ಮಾಸ್ಕೋದಲ್ಲಿ ನಡೆದ ಭಯೋತ್ಪಾದಕ ದಾಳಿ

WhatsApp Group Join Now
Telegram Group Join Now
Instagram Group Join Now
Spread the love

moscow attack

ಮಾಸ್ಕೋದಲ್ಲಿ ನಡೆದ ಭಯೋತ್ಪಾದಕ ದಾಳಿಮಾಲ್ ನಲ್ಲಿ ಸಂಗೀತ ಕೇಳಲು ಬಂದವರ ರಕ್ತ ಚೆಲ್ಲಾಡಿದ ಉಗ್ರರು 60ಕ್ಕೂ ಹೆಚ್ಚು ಸಾವು 140ಕ್ಕು ಹೆಚ್ಚು ಗಾಯ.

ಮಾಸ್ಕೋ: ಇತ್ತೀಚಿನ ಕೆಲಸಮಯದಿಂದ ಕಂಡು ಕೇಳರಿಯದಂತಹ ಭೀಕರ ಉಗ್ರರ ಅಟ್ಟಹಾಸ ರಷ್ಯಾದ ರಾಜಧಾನಿ ಮಾಸ್ಕೋದಲ್ಲಿ ನಡೆದು ಹೋಗಿದೆ. ನಿನ್ನೆ ರಾತ್ರಿ ಮಾಲ್‌ ಒಂದರಲ್ಲಿ ನಡೆಯುತ್ತಿದ್ದ ಸಂಗೀತ ಕಾರ್ಯಕ್ರಮದಲ್ಲಿ (2024 Crocus City Hall Attack) ರಕ್ತಪಿಪಾಸು ಉಗ್ರರು ಅಮಾಯಕರ ರಕ್ತ ಚೆಲ್ಲಾಡಿದ್ದಾರೆ.

ಹೌದು.. ರಷ್ಯಾದ ರಾಜಧಾನಿ ಮಾಸ್ಕೋದ ಕ್ರೋಕಸ್ ಸಿಟಿ ಹಾಲ್‌ನಲ್ಲಿ ಐವರು ಬಂದೂಕುಧಾರಿಗಳು ಜನರ ಗುಂಪಿನ ಮೇಲೆ ಮನಸೋಇಚ್ಛೆ ಗುಂಡಿನ ದಾಳಿ ನಡೆಸಿದ್ದು, ಈ ಭಯಾನಕ ಘಟನೆಯಲ್ಲಿ 60ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, 140ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಈ ಘಟನೆಯಲ್ಲಿ ನಡೆದ ಸಾವಿನ ಸಂಖ್ಯೆಯ ಬಗ್ಗೆ ರಷ್ಯಾದ ಉನ್ನತ ಭದ್ರತಾ ಸಂಸ್ಥೆ ಖಚಿತ ಪಡಿಸಿದೆ. ಅಲ್ಲದೇ, ಮಾಸ್ಕೋದಲ್ಲಿ ನಡೆದಿದ್ದು ಭಯೋತ್ಪಾದಕ ದಾಳಿ ಎಂದು ರಷ್ಯಾದ ಅಧಿಕಾರಿಗಳು ಖಚಿತಪಡಿಸಿದ್ದಾರೆ.

ಮಾಧ್ಯಮ ವರದಿಗಳ ಪ್ರಕಾರ, ಘಟನೆ ನಡೆದ ಬೆನ್ನಲ್ಲೇ ಪರಿಸ್ಥಿತಿಯನ್ನು ನಿಯಂತ್ರಿಸಲು ರಷ್ಯಾದ ರಾಷ್ಟ್ರೀಯ ಗಾರ್ಡ್‌ಗಳು ಸ್ಥಳಕ್ಕೆ ತಲುಪಿದ್ದು, ಭಯೋತ್ಪಾದಕರನ್ನು ಮಟ್ಟ ಹಾಕಲು ಕಾರ್ಯಾಚರಣೆಯನ್ನು ಪ್ರಾರಂಭಿಸಿದರು. ಈ ಕಾರ್ಯಾಚರಣೆಯಲ್ಲಿ ಹೆಲಿಕಾಪ್ಟರ್‌ಗಳ ಸಹಾಯವನ್ನೂ ಪಡೆಯಲಾಗಿದೆ. 50 ಕ್ಕೂ ಹೆಚ್ಚು ಆಂಬ್ಯುಲೆನ್ಸ್‌ಗಳು ಕೂಡ ಘಟನಾ ಸ್ಥಳಕ್ಕೆ ತಲುಪಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಮಾಧ್ಯಮ ವರದಿಯ ಪ್ರಕಾರ ಐವರು ದಾಳಿಕೋರರ ಪೈಕಿ ಒಬ್ಬನನ್ನು ಹಿಡಿಯಲಾಗಿದೆ ಎಂದು ಹೇಳಲಾಗುತ್ತಿದೆ.

ರಷ್ಯಾದ ಸರ್ಕಾರಿ ಮಾಧ್ಯಮದ ಪ್ರಕಾರ, ಸಂಗೀತ ಕಚೇರಿ ಆಯೋಜನೆ ಮಾಡಲು ಸಿದ್ಧತೆ ನಡೆಸಿದ್ದ ಕ್ರೋಕಸ್ ಸಿಟಿ ಹಾಲ್‌ಗೆ ಕೆಲವು ಅಪರಿಚಿತ ದುಷ್ಕರ್ಮಿಗಳು ಏಕಾಏಕಿ ಪ್ರವೇಶಿಸಿದರು. ಸಂಗೀತ ಕಾರ್ಯಕ್ರಮ ಪ್ರಾರಂಭವಾಗುವ ಮೊದಲು ಗುಂಡು ಹಾರಿಸಿದರು. ವರದಿಗಳ ಪ್ರಕಾರ, ಸಭಾಂಗಣದಲ್ಲಿ ಗುಂಡು ಹಾರಿಸಿದ ನಂತರ, ಗ್ರೆನೇಡ್ ದಾಳಿ ಕೂಡ ನಡೆಸಲಾಗಿದೆ ಎಂದು ತಿಳಿದು ಬಂದಿದೆ.

ರಷ್ಯಾದ ಪ್ರಸಿದ್ಧ ರಾಕ್ ಬ್ಯಾಂಡ್ ‘ಪಿಕ್ನಿಕ್’ ಸಂಗೀತ ಕಚೇರಿಯಲ್ಲಿ ಪಾಲ್ಗೊಳ್ಳಲು ಕ್ರೋಕಸ್ ಸಿಟಿ ಹಾಲ್‌ನಲ್ಲಿ ಜನಸಂದಣಿ ಸೇರಿದ್ದಾಗ ಈ ದಾಳಿ ನಡೆದಿದೆ. ಈ ಸಭಾಂಗಣದಲ್ಲಿ 6,000 ಕ್ಕೂ ಹೆಚ್ಚು ಜನರು ಕುಳಿತುಕೊಳ್ಳುವ ಸಾಮರ್ಥ್ಯ ಇದೆ. ಸಂಗೀತ ಕಾರ್ಯಕ್ರಮದ ಟಿಕೆಟ್‌ಗಳು ಮೊದಲೇ ಎಲ್ಲಾ ಸೇಲ್ ಆಗಿತ್ತು. ಒಂದು ಅಂದಾಜಿನ ಪ್ರಕಾರ ಸಭಾಂಗಣದಲ್ಲಿ 6200 ಜನರು ಇದ್ದರು ಎಂದು ಹೇಳಲಾಗಿದೆ. ದುಷ್ಕರ್ಮಿಗಳು ಮೊದಲೇ ಪ್ಲಾನ್ ಹಾಕಿ ಈ ದಾಳಿ ನಡೆಸಿದ್ದಾರೆ ಎಂದು ಶಂಕಿಸಲಾಗಿದೆ.

ಯುದ್ಧದ ಉಡುಪಿನಲ್ಲಿ ಕನ್ಸರ್ಟ್ ಹಾಲ್‌ಗೆ ಪ್ರವೇಶಿಸಿದ ಕನಿಷ್ಠ ಐದು ಜನರು ಉಗ್ರರ ಗುಂಪು ಏಕಾಏಕಿ ಗುಂಡು ಹಾರಿಸಿದ್ದಾರೆ. ಇನ್ನು ಘಟನೆ ನಂತರ ಆ ಕಟ್ಟಡದಲ್ಲಿ ಸ್ಫೋಟ ಮತ್ತು ಬೆಂಕಿ ಕಾಣಿಸಿಕೊಂಡಿದೆ ಅಂತಾನೂ ಹೇಳಲಾಗ್ತಿದೆ. ಈ ಭಯೋತ್ಪಾದಕ ದಾಳಿಯನ್ನು ಐಸಿಸ್ ತಾನು ಮಾಡಿದ್ದೆಂದು ಹೇಳಿಕೊಂಡಿದೆ ಎನ್ನಲಾಗಿದ್ದು, ಆದರೆ ಯಾವುದೇ ದೃಢೀಕರಣವನ್ನು ಸ್ವೀಕರಿಸಲಾಗಿಲ್ಲ. ಮಾಸ್ಕೋ ಮೇಯರ್ ಸೆರ್ಗೆಯ್ ಸೊಬಯಾನಿನ್ ಈ ದಾಳಿಯನ್ನು ‘ದೊಡ್ಡ ದುರಂತ’ ಎಂದು ಕರೆದಿದ್ದಾರೆ.

ಗುಂಡಿನ ದಾಳಿ, ಸ್ಫೋಟ ಮತ್ತು ಬೆಂಕಿಯ ಘಟನೆಯನ್ನು ಭಯೋತ್ಪಾದಕ ದಾಳಿ ಎಂದು ಪರಿಗಣಿಸಿ ರಷ್ಯಾದ ಉನ್ನತ ತನಿಖಾ ಸಂಸ್ಥೆ ತನಿಖೆ ನಡೆಸುತ್ತಿದೆ. ದಾಳಿಯ ಹಿಂದೆ ಯಾರಿರಬಹುದು ಎಂದು ಹೇಳಲಾಗದಿದ್ದರೂ, ಆರೋಪಗಳ ಬಗ್ಗೆ ಕ್ರಿಮಿನಲ್ ತನಿಖೆಯನ್ನು ಪ್ರಾರಂಭಿಸಿದೆ ಎಂದು ತನಿಖಾ ಸಮಿತಿ ಹೇಳಿದೆ. ಪ್ರಸ್ತುತ, ಮಾಸ್ಕೋ ವಿಮಾನ ನಿಲ್ದಾಣವನ್ನು ಮುಚ್ಚಲಾಗಿದೆ ಮತ್ತು ರೈಲುಗಳ ಸಂಚಾರವನ್ನು ಸಹ ನಿಲ್ಲಿಸಲಾಗಿದೆ. ಮಾಸ್ಕೋದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಜನರು ಸೇರುವುದನ್ನು ಸಹ ನಿಷೇಧಿಸಲಾಗಿದೆ.

ವರದಿಗಳ ಪ್ರಕಾರ ಕೆಲ ದಿನಗಳ ಹಿಂದೆ ಅಮೆರಿಕ ಉಗ್ರರ ದಾಳಿಗೆ ಸಂಬಂಧಿಸಿದಂತೆ ಎಚ್ಚರಿಕೆ ನೀಡಿತ್ತು.

 

ಮಾಸ್ಕೋದಲ್ಲಿಸಾಮೂಹಿಕ ಸಮಾರಂಭಗಳಿಗೆ ಹೋಗದಂತೆ ಅವರು ತಮ್ಮ ನಾಗರಿಕರಿಗೆ ಸಲಹೆ ನೀಡಿದ್ದರು. ಈ ಭಯೋತ್ಪಾದಕ ದಾಳಿಗೆ ಸಂಬಂಧಿಸಿದಂತೆ ಅಮೆರಿಕ ಹೇಳಿಕೆ ನೀಡಿದ್ದು, ಮಾಸ್ಕೋದಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯಲ್ಲಿ ಉಕ್ರೇನ್ ಪಾತ್ರದ ಬಗ್ಗೆ ಯಾವುದೇ ಪ್ರಾಥಮಿಕ ಸೂಚನೆಗಳಿಲ್ಲ ಎಂದು ಹೇಳಿದೆ. ಅಮೆರಿಕ ಇನ್ನೂ ಮಾಹಿತಿ ಸಂಗ್ರಹಿಸುತ್ತಿದೆ ಎಂದು ರಾಷ್ಟ್ರೀಯ ಭದ್ರತಾ ಮಂಡಳಿಯ ವಕ್ತಾರ ಜಾನ್ ಕಿರ್ಬಿ ಹೇಳಿದ್ದಾರೆ. ಮತ್ತೊಂದೆಡೆ ಉಕ್ರೇನ್ ಕೂಡ ಈ ದಾಳಿಗೂ ನಮಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿಕೊಂಡಿದೆ.

ಇನ್ನು, ಮಾಸ್ಕೋದಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಉಕ್ರೇನ್ ಅಥವಾ ಉಕ್ರೇನಿಯನ್ನರು ಭಾಗಿಯಾಗಿರುವ ಯಾವುದೇ ಸೂಚನೆ ಕಂಡುಬಂದಿಲ್ಲ ಎಂದು ಅಮೆರಿಕಾದ ಶ್ವೇತಭವನ ಹೇಳಿದ್ದಕ್ಕೆ ರಷ್ಯಾದ ವಿದೇಶಾಂಗ ಸಚಿವಾಲಯದ ವಕ್ತಾರ ಮಾರಿಯಾ ಜಖರೋವಾ ಪ್ರತಿಕ್ರಿಯೆ ನೀಡಿದ್ದು, ಯಾವ ಆಧಾರದ ಮೇಲೆ ವಾಷಿಂಗ್ಟನ್‌ನಲ್ಲಿ ಕುಳಿತಿರುವ ಅಧಿಕಾರಿಗಳು ಈ ದುರಂತದ ನಡುವೆ ಒಬ್ಬರ ಮುಗ್ಧತೆಯ ಬಗ್ಗೆ ತೀರ್ಮಾನಗಳನ್ನು ತೆಗೆದುಕೊಳ್ಳುತ್ತಿದ್ದಾರೆ? ಯುನೈಟೆಡ್ ಸ್ಟೇಟ್ಸ್ ಈ ವಿಷಯದಲ್ಲಿ ಯಾವುದೇ ವಿಶ್ವಾಸಾರ್ಹ ಮಾಹಿತಿಯನ್ನು ಹೊಂದಿದ್ದರೆ, ಅದನ್ನು ತಕ್ಷಣವೇ ರಷ್ಯಾಗೆ ವರ್ಗಾಯಿಸಬೇಕು. ಆದರೆ ಅಂತಹ ಯಾವುದೇ ಮಾಹಿತಿ ಇಲ್ಲದಿದ್ದರೆ, ಯಾರಿಗೂ ಕ್ಲೀನ್ ಚಿಟ್ ನೀಡುವ ಹಕ್ಕು ಶ್ವೇತಭವನಕ್ಕೆ ಇರುವುದಿಲ್ಲ. ಈ ದಾಳಿಯ ಹಿಂದೆ ಯಾರಿದ್ದಾರೆ ಎಂಬುದನ್ನು ರಷ್ಯಾ ಪತ್ತೆ ಮಾಡುತ್ತದೆ ಎಂದು ಖಡಕ್ ಆಗಿ ಹೇಳಿದ್ದಾರೆ.

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಈ ದಾಳಿಯನ್ನು ತೀವ್ರವಾಗಿ ಖಂಡಿಸಿದೆ.

ಇನ್ನು, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಈ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದು, ಇದನ್ನು “ಹೇಯ ಮತ್ತು ಹೇಡಿತನದ ಭಯೋತ್ಪಾದಕ ದಾಳಿ” ಎಂದು ಕರೆದಿದೆ. ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಕೂಡ ಈ ಭಯೋತ್ಪಾದಕ ದಾಳಿಯನ್ನು ಖಂಡಿಸಿದ್ದು, ಗುಂಡಿನ ದಾಳಿಗೆ ಬಲಿಯಾದವರಿಗೆ ಫ್ರಾನ್ಸ್ ಸಂತಾಪ ಸೂಚಿಸುತ್ತದೆ ಎಂದು ಹೇಳಿದ್ದಾರೆ. ಮಾಸ್ಕೋದಲ್ಲಿ ಅಮಾಯಕ ನಾಗರಿಕರ ಹತ್ಯಾಕಾಂಡವನ್ನು ಒಪ್ಪಲು ಸಾಧ್ಯವಿಲ್ಲ ಎಂದು ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿ ಕೂಡ ಹೇಳಿದ್ದಾರೆ.

https://x.com/TimesAlgebraIND/status/1771253672120578210?s=20

photo source ; www.france24.com


Spread the love

Leave a Comment

error: Content is protected !!