ಇಳಕಲ್‌ದ ಗೌಡಪ್ಪ ಡಾಬಾದಲ್ಲಿ ಊಟ ಸವಿದ ಮಾಜಿ ಸಚಿವ ಸುರೇಶಕುಮಾರ
ಇಳಕಲ್ : ಈಶಾನ್ಯ ಪದವೀಧರ ಕ್ಷೇತ್ರದ ವಿಧಾನ ಪರಿಷತ್ ಚುನಾವಣಾ ಪ್ರಚಾರ ಮುಗಿಸಿಕೊಂಡು ಕಲಬುರ್ಗಿ ಯಿಂದ ರಾಷ್ಟ್ರೀಯ ಹೆದ್ದಾರಿ ೫೦ ರಲ್ಲಿ ಬರುತ್ತಿದ್ದಾಗ ರಾತ್ರಿ ೯.೦೦ ಗಂಟೆಗೆ ಇಳಕಲ್ ಬಳಿ ಈ ಹೋಟೆಲ್ ಅನ್ನು (#ಗೌಡಪ್ಪನ_ಡಾಬಾ) ಇಳಕಲ್ಲಿನ ಗೆಳೆಯ ಶ್ರೀ ಜಗದೀಶ್ ಕಸ್ತೂರಿ ಪರಿಚಯಿಸಿದರು.
ಇದೊಂದು ವಿಶೇಷವಾದ ಡಾಬಾ. ನಮಗೆ ಗೊತ್ತಿರುವ ಬೇರೆ ಡಾಬಾ ರೀತಿಯದಲ್ಲ. ನಾಗಣ್ಣ ಗೌಡರ ಮತ್ತು ಅವರ ಪುತ್ರರಾದ ಪ್ರಶಾಂತ್ ಹಾಗೂ ಸಂತೋಷ ಅವರು ಈ ಡಾಬಾವನ್ನು ನಡೆಸುತ್ತಿದ್ದಾರೆ.
(ಸುಮಾರು ೧೫ ವರ್ಷಗಳ ಹಿಂದೆ ನಾನು ತುಮಕೂರು ಉಸ್ತುವಾರಿ ಸಚಿವನಾಗಿ ಕಾರ್ಯ ನಿರ್ವಹಿಸುತ್ತಿದ್ದಾಗ, ಗೌಡರ ಮಗ ಸಂತೋಷ್ ಶ್ರೀ ಸಿದ್ದಗಂಗಾ ಮಠದಲ್ಲಿ ಓದುತ್ತಿದ್ದರಂತೆ. ಆಗ ನನ್ನನ್ನು ಕಂಡಿದ್ದರಂತೆ)
ಸುಮಾರು ೩೫ ವರ್ಷಗಳ ಹಿಂದೆ ಇಲ್ಲಿ ಉತ್ತರ ಭಾರತದ ಶೈಲಿಯ, ಜಮ್ಮು ಹೆಸರಿನ ಒಂದು ಡಾಬಾ ನಡೆಯುತ್ತಿತ್ತು. ಆ ಹಳೆಯ ಡಾಬಾ ಮಾಲೀಕರು ನಾಗಣ್ಣ ಗೌಡರಿಗೆ ಇದನ್ನು ಬಿಟ್ಟುಕೊಟ್ಟು ಮುನ್ನಡೆಸಲು ತಿಳಿಸಿದರು.
ಇಲ್ಲಿ ಈಗ ಸಾವಯವ ಆಹಾರ ದೊರಕುತ್ತದೆ. ವಿಶೇಷವಾಗಿ ಇಲ್ಲಿನ ಮೊಸರಿನ ಕೆನೆಯನ್ನು ಹಚ್ಚಿದ ಮಸಾಲ ಜೋಳದ ರೊಟ್ಟಿ ಬಹಳ ಸೊಗಸಾಗಿತ್ತು. ಹಾಗೆಯೇ ಮಸಾಲಾ ಪರೋಟವು ಇಲ್ಲಿ ಪ್ರಸಿದ್ಧಿ ಎಂದು ತಿಳಿದು ಬಂತು.
ತಾವೇ ಎಮ್ಮೆಗಳನ್ನು ಸಾಕಿ ಅದರಿಂದಲೇ ಪುಷ್ಕಳವಾದ ಮೊಸರು ತಯಾರಿಸಿ ಇಲ್ಲಿ ಉಪಯೋಗಿಸುತ್ತಿದ್ದಾರೆ. ಕಾಳುಗಳನ್ನು ಸಹ ಬಹಳ ಸೊಗಸಾಗಿ ಮೊಳಕೆ ಬರುವಂತೆ ಮಾಡಿ ಅದರಲ್ಲಿ ಪಲ್ಲೆ ಮಾಡುತ್ತಾರೆ.
ಒಟ್ಟಾರೆ ಬಹಳ ದಿನಗಳ ನಂತರ ಒಂದು ವಿಶಿಷ್ಟ ಶೈಲಿಯ ಊಟವನ್ನು ಮಾಡುವ ಸದವಕಾಶ ಇಂದು ದೊರಕಿತು.
ನಮಗೂ ಹೊಟ್ಟೆ ಬಹಳ ಹಸಿದಿತ್ತು. ಸೊಗಸಾದ ಆಹಾರ ಸವಿದ ಸಂತಸ ನಮ್ಮದಾಯಿತು. ನೀವೂ ಆ ದಾರಿಯಲ್ಲಿ ಹೋಗುವ ಅವಕಾಶ ಸಿಕ್ಕಾಗ ಅವಶ್ಯಕವಾಗಿ ಒಮ್ಮೆ ಭೇಟಿ ಕೊಡಿ. ತೃಪ್ತಿ ಪಡೆಯುವಿರಿ.ಆ ಮಾಲೀಕರ ಶ್ರದ್ಧೆಯಿಂದ ಕೂಡಿದ ಸರ್ವಿಸ್ ಕಂಡು ಖುಷಿಯಾಯಿತು. ನಮ್ಮ ಮೆಚ್ಚುಗೆಯ ನುಡಿ ಅವರಿಗೆ ಎಂದು ಮಾಜಿ ಸಚಿವರು ಹಾಲಿ ಶಾಸಕರಾದ ಸುರೇಶ ಕುಮಾರ ಅವರು ತಮ್ಮ ಫೇಸ್ ಪೇಜ್‌ದಲ್ಲಿ ಹಂಚಿಕೊಂಡಿದ್ದಾರೆ.