7ನೇ ರಾಜ್ಯ ವೇತನ ಆಯೋಗದ ವರದಿ ರಾಜ್ಯ ಸರ್ಕಾರಿ ನೌಕರರ ಸುದೀರ್ಘ ಕಾಯುವಿಕೆ ನಂತರ ಶುಭ ಸುದ್ದಿ ಸಿಕ್ಕಿದೆ .
ರಾಜ್ಯ ಸರ್ಕಾರಿ ನೌಕರರ ಸುದೀರ್ಘ ಕಾಯುವಿಕೆ ನಂತರ ಶುಭ ಸುದ್ದಿ ಸಿಕ್ಕಿದೆ. ಸರ್ಕಾರಿ ನೌಕರರ ವೇತನ ಪರಿಷ್ಕರಣೆಗೆ ಸಂಬಂಧಿಸಿದಂತೆ ರಚಿಸಲಾಗಿದ್ದ 7ನೇ ರಾಜ್ಯ ವೇತನ ಆಯೋಗದ ವರದಿಯನ್ನು ಸ್ವೀಕರಿಸಲು ರಾಜ್ಯ ಸರ್ಕಾರ ಕೊನೆಗೂ ಸಮ್ಮತಿ ನೀಡಿದೆ.
ಶನಿವಾರ ಸಿಎಂ ಸಿದ್ದರಾಮಯ್ಯ ತಮ್ಮ ಅಧಿಕೃತ ನಿವಾಸ ‘ಕಾವೇರಿ’ ಯಲ್ಲಿ 7ನೇ ವೇತನ ಆಯೋಗದ ಅಧ್ಯಕ್ಷರು ಮತ್ತು ಸದಸ್ಯರಿಂದ ವರದಿಯನ್ನು ಸ್ವೀಕರಿಸಲಿದ್ದಾರೆ. ಮುಖ್ಯಮಂತ್ರಿ ಅವರ ಅಧಿಕೃತ ಶನಿವಾರದ ಕಾರ್ಯ ಕಲಾಪಗಳ ಪಟ್ಟಿಯಲ್ಲಿ 7ನೇ ವೇತನ ಆಯೋಗದ ವರದಿ ಸ್ವೀಕರಿಸುವ ಬಗ್ಗೆ ಮಾಹಿತಿ ಸಿಕ್ಕಿದೆ.
ರಾಜ್ಯ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಸುಧಾಕರ್ ರಾವ್ ಅವರ ಅಧ್ಯಕ್ಷತೆಯಲ್ಲಿ 7ನೇ ರಾಜ್ಯ ವೇತನ ಆಯೋಗವನ್ನು ರಚಿಸಲಾಗಿದೆ. 7ನೇ ವೇತನ ಆಯೋಗದ ಅವಧಿ ಶುಕ್ರವಾರ ಮುಕ್ತಾಯಗೊಳ್ಳುತ್ತಿದ್ದು, ವರದಿ ಸಲ್ಲಿಸಲು ಆಯೋಗ ಸಜ್ಜಾಗಿದೆ.
ಬಜೆಟ್ನಲ್ಲಿ ಸಿಎಂ ಸಿದ್ದರಾಮಯ್ಯ 13 ಸಾವಿರ ಕೋಟಿ ರೂಪಾಯಿಗಳನ್ನು ವೇತನ ಆಯೋಗದ ವರದಿ ಜಾರಿಗೆ ಮೀಸಲಿಟ್ಟಿದ್ದಾರೆ. ರಾಜ್ಯದಲ್ಲಿ 5.11 ಲಕ್ಷ ಸರ್ಕಾರಿ ನೌಕರರು ಇದ್ದು, ಪಿಂಚಣಿದಾರರ ಸಂಖ್ಯೆ 5.62 ಲಕ್ಷವಿದೆ. 7ನೇ ವೇತನ ಆಯೋಗದ ವರದಿ ಜಾರಿ ಮಾಡಿದರೆ ಸರ್ಕಾರದ ಬೊಕ್ಕಸಕ್ಕೆ ವರ್ಷಕ್ಕೆ 15 ರಿಂದ 20 ಸಾವಿರ ಕೋಟಿ ರೂಪಾಯಿ ಹೊರೆ ಬೀಳುತ್ತದೆ ಎಂದು ಅಂದಾಜಿಸಲಾಗಿದೆ.