Farmers’ association requests CM ಇಳಕಲ್ಲ ತಾಲೂಕನ್ನು ಸಂಪೂರ್ಣ ನೀರಾವರಿಗೆ ಒಳಪಡಿಸುವಂತೆ ಸಿಎಂಗೆ ರೈತ ಸಂಘ ಮನವಿ
ಇಳಕಲ್ಲ : ತಾಲೂಕನ್ನು ಸಂಪೂರ್ಣ ನೀರಾವರಿಗೆ ಒಳಪಡಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಪದಾಧಿಕಾರಿಗಳು ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು. ಆಲಮಟ್ಟಿ ಜಲಾಶಯಕ್ಕೆ ಬಾಗೀನ ಅರ್ಪಣೆ ಮಾಡಲು ಆಗಮಿಸಿದ್ದ ಸಂದರ್ಭದಲ್ಲಿ ಶಾಸಕ ವಿಜಯಾನಂದ ಕಾಶಪ್ಪನವರ ಸಹಯೋಗದಲ್ಲಿ ರೈತ ಮುಖಂಡರು ಮನವಿ ಪತ್ರವನ್ನು ನೀಡಿದರು.
ರೈತ ಸಂಘದ ಕಾರ್ಯಾಧ್ಯಕ್ಷ ಗುರು ಗಾಣಿಗೇರ ಮಾತನಾಡಿ ತಾಲೂಕಿನ ಪೂರ್ವ ಹಾಗೂ ದಕ್ಷಿಣ ಭಾಗದ ರೈತರಿಗೆ ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-೧ ರ ಆಡಿಯಲ್ಲಿ ಬರುವ ಕೊಪ್ಪಳ ಏತ ನೀರಾವರಿ ಯೋಜನೆಯಲ್ಲಿ ಸೇರಿಸಿ ಹನಿ ನೀರಾವರಿ ಒದಗಿಸಿಕೊಡಬೇಕು, ಸಮಗ್ರ ತಾಲೂಕನ್ನು ನೀರಾವರಿಗೆ ಒಳಪಡಿಸಬೇಕು ಎಂದು ಕಳೆದ ಒಂದೂವರೆ ದಶಕದಿಂದ ತಾಲೂಕಿನ ಪ್ರಮುಖ ಮಠಾಧೀಶರ ನೇತೃತ್ವದಲ್ಲಿ ಹೋರಾಟ ನಡೆಸಿದ ಫಲವಾಗಿ ಶೇ.೭೦ ರಷ್ಟು ತಾಲೂಕಿನ ಜಮೀನು ನೀರಾವರಿಗೆ ಒಳಪಟ್ಟಿದೆ. ಆದರೆ ಪೂರ್ವ ಹಾಗೂ ದಕ್ಷಿಣ ಭಾಗದ ೨೮ ಹಳ್ಳಿಗಳು ನೀರಾವರಿ ಯೋಜನೆಯಲ್ಲಿ ಸೇರ್ಪಡೆಯಾಗದೆ ವಂಚಿತಗೊAಡು ಅನ್ಯಾಯವಾಗಿದ್ದು , ತಾಲೂಕಿನ ಪೂರ್ವಭಾಗದಲ್ಲಿ ಯಾವ ನೀರಾವರಿ ಯೋಜನೆಗಳು ಇಲ್ಲಾ, ಇಲ್ಲಿ ಶೇ.೮೦ ಕ್ಕಿಂತಲೂ ಹೆಚ್ಚಿನ ರೈತರು ಕೃಷಿಕರು ಹಾಗೂ ಕೃಷಿ ಕಾರ್ಮಿಕರು ಇದ್ದಾರೆ.
ಕೃಷಿಯೇ ಅವರ ಜೀವನದ ಆಧಾರವಾಗಿದೆ ಮಳೆ ಬಂದರೆ ಬೆಳೆ. ವರ್ಷಕ್ಕೊಮ್ಮೆ ಮಳೆಯಾಗುತ್ತಿದೆ ಕುಡಿಯಲು ನೀರು ಇಲ್ಲದ ಪರಿಸ್ಥಿತಿ ಇಲ್ಲಿದೆ. ಎಲ್ಲಿ ಆದರೂ ಕೂಲಿ ನಾಲಿ ಮಾಡಿ ಬದುಕ ಬೇಕೆಂದರೆ ಈ ಭಾಗದಲ್ಲಿ ಯಾವ ಕೈಗಾರಿಕೆಗಳಾಗಲಿ, ಕಾರ್ಖಾನೆಗಳಾಗಲಿ ಇರುವುದಿಲ್ಲ ಹೀಗಾಗಿ ಪ್ರತಿ ವರ್ಷವೂ ರೈತರು ಗುಳೆ ಹೋಗುವದು ತಪ್ಪಿಲ್ಲ ಈ ಭಾಗದ ರೈತರಿಗೆ ಏತ ನೀರಾವರಿ ಯೋಜನೆ ಒಂದೇ ಆಧಾರವಾಗಿದೆ.
ಆದ ಕಾರಣ ನೀರಾವರಿ ಯೋಜನೆಯಲ್ಲಿ ಪೂರ್ವಭಾಗದ ೨೮ ಹಳ್ಳಿಗಳ ರೈತರಿಗೆ ಒದಗಿಸಿಕೊಡುವದು ಅತ್ಯವಶ್ಯವಾಗಿದೆ. ಶ್ರೀನಿರಜುಂಡಪ್ಪನವರ ವರದಿ ಪ್ರಕಾರ ಹುನಗುಂದ ತಾಲೂಕು ವಿಶೇಷವಾಗಿ ಪೂರ್ವಭಾಗ ಹಿಂದುಳಿದ ಪ್ರದೇಶವಾಗಿದೆ ಈ ಭಾಗದಲ್ಲಿ ಬಡ ರೈತರು, ಕೂಲಿಕಾರರು ಇದ್ದು ಅವರ ಆರ್ಥಿಕ ಪರಿಸ್ಥಿತಿ ಚನ್ನಾಗಿಲ್ಲ ಈ ಭಾಗದಲ್ಲಿ ಫಲವತ್ತಾದ ಭೂಮಿ ಇದ್ದು ಅನಿಶ್ಚಿತ ಮಳೆ ಹಾಗೂ ಅಕಾಲಿಕ ಮಳೆಯಿಂದಾಗಿ ರೈತರ ಬದುಕು ಚನ್ನಾಗಿಲ್ಲ ಇಲ್ಲಿಯ ರೈತರು ಕಷ್ಟ ಸಹಿಷ್ಣುಗಳಾಗಿದ್ದು ಇವರಿಗೆ ನೀರಾವರಿ ಒದಗಿಸಿಕೊಟ್ಟರೆ ಇಡೀ ರಾಜ್ಯಕ್ಕೆ ಮಾದರಿಯಾಗಿ ಅಭಿವೃದ್ಧಿ ಹೊಂದುತ್ತಾರೆ ಎಂದು ಮನವಿ ಮಾಡಿಕೊಂಡರು. ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಶಶಿಕಾಂತ ಬಂಡರಗಲ್ಲ, ಸಿದ್ದಣ್ಣ ಘಂಟಿ, ದೊಡ್ಡಪ್ಪ ದಂಡಿನ, ಸುರೇಶ ಶೆಟ್ಟರ, ಬಸು ಪಾಟೀಲ ಇದ್ದರು.