ಗಣೇಶ ಹಬ್ಬವನ್ನು ಶಾಂತಿಯುತವಾಗಿ ಆಚರಿಸಲು ಕರೆ
ಇಳಕಲ್ : ಸೆಪ್ಟೆಂಬರ್ ತಿಂಗಳಲ್ಲಿ ಬರುವ ಗಣೇಶ ಹಬ್ಬವನ್ನು ಶಾಂತಿಯುತವಾಗಿ ಆಚರಿಸಲು ಡಿವಾಯ್ ಎಸ್ ಪಿ ವಿಶ್ವನಾಥರಾವ್ ಕುಲಕರ್ಣಿ ಕರೆಕೊಟ್ಟರು.
ಸೋಮವಾರದಂದು ಸಂಜೆ ಶಹರ್ ಪೋಲಿಸ್ ಠಾಣೆಯ ಆವರಣದಲ್ಲಿ ನಡೆದ ಶಾಂತಿ ಸಮಿತಿ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು ರಸ್ತೆಯ ಮಧ್ಯದಲ್ಲಿ ಗಣಪತಿ ಮೂರ್ತಿಯನ್ನು ಕೂಡಿಸುವದಾಗಲಿ, ಜನಸಂಚಾರಕ್ಕೆ ತೊಂದರೆ ಉಂಟು ಮಾಡುವದಾಗಲಿ ,ಒತ್ತಾಯದಿಂದ ದೇಣಿಗೆ ಸಂಗ್ರಹಿಸುವದಾಗಲಿ ಇಂತಹ ಯಾವುದೇ ಕೆಲಸಗಳನ್ನು ಮಾಡದೇ ನಿಮ್ಮ ನಿಮ್ಮ ಗಲ್ಲಿಗಳಲ್ಲಿ ಗಣೇಶ ಪ್ರತಿಷ್ಠಾಪನೆ ಮಾಡಿ ಅವುಗಳನ್ನು ಶಾಂತ ರೀತಿಯಿಂದ ವಿಸರ್ಜನೆ ಮಾಡಿ ಗಣೇಶ ಉತ್ಸವವನ್ನು ಯಶಸ್ವಿ ಗೊಳಿಸಿ ಎಂದು ವಿನಂತಿಸಿದರು.
ಪಿಎಸ್ ಐ ಷಹಜಹಾನ ನಾಯಕ ಮಾತನಾಡಿ ಗಣೇಶ ಉತ್ಸವ ಹೆಸರಲ್ಲಿ ಯಾರಾದರೂ ಗದ್ದಲ ಗೊಂದಲ ಮಾಡಿದರೆ ಅಂತವರ ಮೇಲೆ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವದು ಎಂದು ಎಚ್ಚರಿಸಿದರು.
ನಗರಸಭೆಯ ಆರೋಗ್ಯ ಅಧಿಕಾರಿ ಮನೋಹರ ಮಾತನಾಡಿ ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆ ಮಾಡಲು ಸರಳ ರೀತಿಯಿಂದ ಪರವಾನಗಿ ಕೊಡಲಾಗುವದು ಅದಕ್ಕಾಗಿ ಪ್ರತ್ಯೇಕ ಕೌಂಟರ್ ವ್ಯವಸ್ಥೆ ನಗರಸಭೆ ಕಾರ್ಯಾಲಯದಲ್ಲಿ ಮಾಡಲಾಗುವದು ಎಂದು ಹೇಳಿದರು.
ಕೆಪಿಟಿಸಿಎಲ್ ಅಧಿಕಾರಿ ಚೇತನ ಮಾತನಾಡಿ ನಗರಸಭೆ ಮತ್ತು ಪೋಲಿಸ್ ಠಾಣೆಯ ಅನುಮತಿ ಪಡೆದ ಪತ್ರಗಳನ್ನು ಹಚ್ಚಿಕೊಟ್ಟರೆ ವಿದ್ಯುತ್ ಪರವಾನಗಿ ಕೊಡಲಾಗುವದು ಎಂದು ಹೇಳಿದರು.
ಶಾಂತಿ ಸಮಿತಿಯ ಸದಸ್ಯರು ತಮ್ಮ ತಮ್ಮ ಅಭಿಪ್ರಾಯವನ್ನು ತಿಳಿಸಿ ಶಾಂತಿಪ್ರಿಯವಾದ ನಗರದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಎಲ್ಲರೂ ಕೂಡಿ ನೋಡಿಕೊಳ್ಳೊಣ ಎಂದು ಹೇಳಿದರು.