ಶಾಲೆಯಲ್ಲಿ ಕಲಿಯುವ ಮಕ್ಕಳೇ ದೇವರು : ಹೈಕೋರ್ಟ್ ನ್ಯಾಯಮೂರ್ತಿ ಸಂಜೀವಕುಮಾರ ಹಂಚಾಟೆ
ಇಳಕಲ್ : ದೇವರನ್ನು ಗುಡಿ ಗುಂಡಾರದಲ್ಲಿ ಹುಡುಕುವ ಅವಶ್ಯಕತೆ ಇಲ್ಲ ಶಾಲೆಗಳಲ್ಲಿ ಕಲಿಯುವ ಮಕ್ಕಳೇ ನಿಜವಾದ ಜೀವಂತ ದೇವರುಗಳು ಎಂದು ಬೆಂಗಳೂರು ಹೈಕೋರ್ಟ್ ನ್ಯಾಯಮೂರ್ತಿ ಸಂಜೀವಕುಮಾರ ಹಂಚಾಟೆ ಹೇಳಿದರು .
ಇಲ್ಲಿನ ಸೆಂಟ್ರಲ್ ಸ್ಕೂಲ್ ದಲ್ಲಿ ತಾವು ಕಲಿತ ಶಾಲೆಯ ಪುನರುಜ್ಜೀವನಕ್ಕಾಗಿ ಗೆಳೆಯರೆಲ್ಲಾ ಸೇರಿಕೊಂಡು ವರ್ಣಾಲಂಕರ ಮಾಡಿ ಸುಂದರವಾದ ಚಿತ್ತಾರಗಳನ್ನು ಬಿಡಿಸಿದ ಸವಿನೆನಪಿನಲ್ಲಿ ಹಮ್ಮಿಕೊಂಡ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಸಂವಿಧಾನದ ಪ್ರಕಾರ ಶಿಕ್ಷಣ ಮೂಲಭೂತ ಹಕ್ಕು ಆಗಿದ್ದು ಸರಕಾರಿ ಶಾಲೆಗಳು ಖಾಸಗಿ ಶಾಲೆಗಳ ಹಾವಳಿಯಲ್ಲಿ ಮರೆಯಾಗುವ ಆತಂಕ ಇದೆ ಅದಕ್ಕೆ ಪ್ರತಿಯೊಬ್ಬ ನಾಗರಿಕರು ತಮ್ಮ ತಮ್ಮ ಊರುಗಳ ಸರಕಾರಿ ಶಾಲೆಗಳ ಪುನರುಜ್ಜೀವನಕ್ಕಾಗಿ ಹೋರಾಡಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಜಾಸ್ಮಿನ್ ಕಿಲ್ಲೇದಾರ ಮಾತನಾಡಿ ದೊಡ್ಡ ದೊಡ್ಡ ಕೆಲಸಗಳು ಆಗಬೇಕಾದರೆ ಸಣ್ಣ ಸಣ್ಣ ಹೆಜ್ಜೆಗಳನ್ನು ಹಾಕುತ್ತಾ ಹೋಗುವ ಅವಶ್ಯಕತೆ ಇದೆ ಎಂದರು.
ನಗರಸಭೆ ಪೌರಾಯುಕ್ರ ಶ್ರೀನಿವಾಸ ಜಾಧವ ಮಾತನಾಡಿ ಮೊದಲು ಎಲ್ಲರೂ ಸರಕಾರಿ ಶಾಲೆಗಳಲ್ಲಿಯೇ ಮುಂದೆ ಬಂದಿದ್ದಾರೆ ಇತ್ತೀಚೆಗೆ ಆರಂಭವಾದ ಖಾಸಗಿ ಶಾಲೆಗಳ ಹಾವಳಿಯಿಂದ ಸರಕಾರಿ ಶಾಲೆಗಳಿಗೆ ಪೆಟ್ಟು ಬಿದ್ದಿದೆ ಹಿಂದೆ ಕಲಿತವರು ತಮ್ಮ ಶಾಲೆಗಳ ಬಗ್ಗೆ ಗಮನ ಹರಿಸುವ ಕಾರ್ಯ ಆಗಲೇ ಬೇಕು ಎಂದರು.
ಇದೇ ಸಮಯದಲ್ಲಿ ಎಲ್ಲಾ ಮಕ್ಕಳಿಗೆ ಮತ್ತು ಗಣ್ಯರಿಗೆ ಪುಸ್ತಕಗಳನ್ನು ಹಂಚಾಟೆಯವರು ವಿತರಿಸಿದರು.
ವೇದಿಕೆಯಲ್ಲಿ ಈಶ್ವರ ಅಂಗಡಿ, ಶಿವಾನಂದ ವಂದಾಲ, ಗಿರಿಜಾ ಕೊಟಗಿ , ಮುರುಗೇಶ ಸಂಗಮ, ಪ್ರಶಾಂತ ಹಂಚಾಟೆ ಬಸವರಾಜ ನಾಲವಾಡದ ಮುಖ್ಯ ಗುರು ಶ್ರೀಧರ ಜೋಗಿನ ಉಪಸ್ಥಿತರಿದ್ದರು.
ಶಾಲೆಯ ಸ್ಥಿತಿ ವೀಕ್ಷಿಸಿದ ಹೈಕೋರ್ಟ್ ನ್ಯಾಯಮೂರ್ತಿ
ಇಲ್ಲಿನ ಕಂಠಿ ಸರ್ಕಲ್ ಮತ್ತು ಅಂಬೇಡ್ಕರ್ ಸರ್ಕಲ್ ಮಧ್ಯದಲ್ಲಿ ಇರುವ ಕೇಂದ್ರ ಶಾಲೆಯ ಪರಿಸ್ಥಿತಿಯನ್ನು ಹೈಕೋರ್ಟ್ ಬೆಂಗಳೂರಿನ ನ್ಯಾಯಮೂರ್ತಿ ಸಂಜೀವಕುಮಾರ ಹಂಚಾಟೆ ಶನಿವಾರದಂದು ವೀಕ್ಷಿಸಿದರು.
೧೯೮೩-೮೪ ನೇ ಸಾಲಿನಲ್ಲಿ ಕಲಿತ ವಿದ್ಯಾರ್ಥಿಗಳೆಲ್ಲ ಸೇರಿಕೊಂಡು ಶಾಲೆಯ ಪುನರುಜ್ಜೀವನಕ್ಕಾಗಿ ಸಂಕಲ್ಪ ಮಾಡಿ ಅದಕ್ಕಾಗಿ ಶ್ರಮ ವಹಿಸಿದ ನಂತರ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿ ನೀಡಿ ಸಂತಸ ವ್ಯಕ್ಯಪಡಿಸಿದರೂ ಇದು ಏನೂ ಅಲ್ಲ ಇನ್ನೂ ಹೆಚ್ಚಿನ ಕೆಲಸ ಕಾರ್ಯಗಳು ಇಲ್ಲಾಗಬೇಕು ಎಂದು ಹೇಳಿ ಕ್ಷೇತ್ರ ಶಿಕ್ಷಣಾಧಿಕಾರಿ ಜಾಸ್ಮಿನ್ ಕಿಲ್ಲೇದಾರ ನಗರಸಭೆ ಪೌರಾಯುಕ್ತ ಶ್ರೀನಿವಾಸ ಜಾಧವ ಜೊತೆಗೆ ಚರ್ಚಿಸಿ ಅನ್ನಪೂರ್ಣ ಕೊಠಡಿಯಿಂದ ಹೊರ ಬರುವ ನೀರಿಗೆ ಇಂಗು ಬಚ್ಚಲು, ಕಟ್ಟಡದ ಸುತ್ತಮುತ್ತ ನಿಲ್ಲುವ ನೀರು ಹೋಗಲು ಕ್ರಮ ಕೈಗೊಳ್ಳಬೇಕು ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುವಂತೆ ಹೊಸ ಯೋಜನೆಗಳು ಶಿಕ್ಷಕರ ನೇಮಕ ಮುಂತಾದ ಕೆಲಸ ಮಾಡಲು ಸೂಚಿಸಿದರು.
ಈ ಸಮಯದಲ್ಲಿ ಶಿಕ್ಷಣ ಇಲಾಖೆಯ ಮತ್ತು ನಗರಸಭೆ ಸಿಬ್ಬಂದಿ ಮತ್ತು ಹಳೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.