price hike ಅಗ್ಗದ ಮದ್ಯದ ದರ ಏರಿಕೆ : ಕಳ್ಳಬಟ್ಟಿಯತ್ತ ವಾಲುತ್ತಿರುವ ಬಡ ಜನತೆ !
ಇಳಕಲ್ : ಸರಕಾರ ಇತ್ತೀಚೆಗೆ ಅಗ್ಗದ ಮದ್ಯದ ದರವನ್ನು ಏರಿಕೆ ಮಾಡಿದ ಪರಿಣಾಮ ಬಡವರು ಮತ್ತು ಮಧ್ಯಮ ವರ್ಗದವರು ಕಳ್ಳಬಟ್ಟಿ ಇಲ್ಲವೇ ಸೆಕೆಂಡ್ಸ್ ಮದ್ಯದತ್ತ ವಾಲುತ್ತಿದ್ದು ಅದರ ಪರಿಣಾಮವಾಗಿ ನಗರದಲ್ಲಿ ಇಬ್ಬರು ಕುಡುಕರು ಒಂದೇ ದಿನ ಮೃತಪಟ್ಟ ಘಟನೆ ನಡೆದಿದೆ.
ಹೊಸಪೇಟೆ ಗಲ್ಲಿಯ ನಿವಾಸಿ ಅಶೋಕ ಸಂಗಪ್ಪ ಹಿಪ್ಪರಗಿ (೪೦) ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಮುಂದಿನ ಸ್ಮಾರ್ಟ್ ಪಾಯಿಂಟ್ ಬಳಿಯ ಫುಟ್ ಪಾತ್ ಮೇಲೆ ಮಲಗಿದಲ್ಲಿಯೇ ಮೃತಪಟ್ಟರೇ ಇನ್ನೋರ್ವ ಗೌಳೇರಗುಡಿ ನವನಗರ ನಿವಾಸಿ ರವಿ ಹಾಲಪ್ಪನವರ್ (೪೫)
ಕೂಡಲಸಂಗಮ ಕಾಲೋನಿಗೆ ಹೋಗುವ ರಸ್ತೆಯ ಹೋಟೆಲ್ ಒಂದರ ಬಳಿ ಮೃತಪಟ್ಟ ಘಟನೆಗಳು ಜನರಲ್ಲಿ ಗಾಬರಿ ಮೂಡಿಸಿವೆ
ಮೇಲ್ನೋಟಕ್ಕೆ ಇಬ್ಬರೂ ಅತಿಯಾಗಿ ಕುಡಿದ ಕಾರಣದಿಂದಲೇ ಮೃತಪಟ್ಟಿದ್ದಾರೆ ಇಬ್ಬರೂ ಅತ್ಯಂತ ಬಡವರು ಎಂಬುದು ಪೋಲಿಸ್ ಮೂಲಗಳಿಂದ ತಿಳಿದು ಬಂದಿದೆ.
ಬಡವರಿಗೆ ಆಧಾರವಾಗಿದ್ದ ಅಗ್ಗದ ಮದ್ಯದ ದರ ಏರಿಕೆಯೊಂದಾಗಿ ಅನಿವಾರ್ಯವಾಗಿ ಅವರು ಕಳ್ಳಬಟ್ಟಿ ಇಲ್ಲವೇ ಸೆಕೆಂಡ್ಸ್ ಮದ್ಯವನ್ನು ಸೇವಿಸಿದ್ದು ಪ್ರಾಣವನ್ನು ತೆರಬೇಕಾದ ಸ್ಥಿತಿಗೆ ಬರಬೇಕಾಯಿತು ಎಂಬುವದೇ ಆತಂಕಕಾರಿ ವಿಷಯವಾಗಿದೆ.
ಬಡಜನರ ಸಂರಕ್ಷಣೆ ಮಾಡುವ ಜವಾಬ್ದಾರಿ ಮತ್ತು ಹೊಣೆ ಸರಕಾರದ ಮೇಲಿದ್ದು ಇಂತಹ ಸಂದಿಗ್ದ ಸಮಯದಲ್ಲಿ ಅದು ತಾನು ತೆಗೆದುಕೊಳ್ಳುವ ನಿರ್ಧಾರ ಯಾವ ಪರಿಣಾಮ ಬೀರುತ್ತದೆ ಎಂಬ ಬಗ್ಗೆಯೂ ಯೋಚಿಸುವದು ಅಗತ್ಯವಲ್ಲವೇ ? ತುಟ್ಟಿ ಮದ್ಯದ ದರವನ್ನು ಇಳಿಕೆ ಮಾಡಿ ಶ್ರೀಮಂತರಿಗೆ ಅನುಕೂಲ ಕಲ್ಪಿಸಿದ ಹಾಗೆ ಅಗ್ಗದ ಮದ್ಯದ ದರವನ್ನು ಪರೀಷ್ಕರಣೆ ಮಾಡುವಾಗ ಈ ಬಗ್ಗೆ ಯೋಚಿಸುವದು ಅಗತ್ಯವಾಗಿತ್ತು. ಅಬಕಾರಿ ಸಚಿವರು ಇರುವ ಜಿಲ್ಲೆಯಲ್ಲಿ ನಡೆದ ಈ ಘಟನೆಗಳ ಬಗ್ಗೆ ವಿಚಾರ ವಿನಿಮಯ ನಡೆದರೇ ಸೂಕ್ತ.