ಬಾಲಕಿಯ ರುಂಡ ಬೇರ್ಪಡಿಸಿದ ಆರೋಪಿಗೆ ಶೀಘ್ರ ಶಿಕ್ಷೆಯಾಗಲಿ : ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಆಗ್ರಹ
ಇಳಕಲ್ : ಕೊಡಗಿನ ಸೋಮವಾರ ಪೇಟೆ ತಾಲ್ಲೂಕಿನ ಕಂಬಾರಗAಡಿಗೆ ಗ್ರಾಮದ ಬಾಲಕಿಯ ರುಂಡವನ್ನು ಬೇರ್ಪಡಿಸಿ ಕೊಂಡೊಯ್ದು ಘಟನೆಯು ಅಮಾನವೀಯವಾದುದು. ಎರಡೇ ದಿನಗಳಲ್ಲಿ ಆರೋಪಿ ಪೊನ್ನಂಡ ಪ್ರಕಾಶ್ ಎಂಬಾತನನ್ನು ಪೋಲೀಸರು ಬಂಧಿಸಿದ್ದು ಶ್ಲಾಘನೀಯ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಅಧ್ಯಕ್ಷ ಅಡ್ವಕೇಟ್ ತಾಹೇರ್ ಹುಸೇನ್ ಹೇಳಿದರು.
ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತೀರ್ಣಳಾದ ಸಂಭ್ರಮದಲ್ಲಿದ್ದ ಬಾಲಕಿಯ ಪ್ರಾಣವನ್ನೇ ಹರಣ ಮಾಡಿದ ಬೀಭತ್ಸ ಘಟನೆಯು ನಮ್ಮ ರಾಜಕೀಯ ವಲಯಗಳಲ್ಲಿ ವಿಶೇಷ ಚರ್ಚೆಯಾಗಲಿಲ್ಲ ಯಾಕೆಂದರೆ ಈರ್ವರೂ ಒಂದೇ ಧರ್ಮದವರಾಗಿದ್ದರು. ಇದರಿಂದಾಗಿ ರಾಜಕೀಯ ಲಾಭ ದೊರೆಯದು ಎಂಬುದನ್ನು ಅರಿತುಕೊಂಡ ಕೆಲ ರಾಜಕಾರಣಿಗಳು ಘಟನೆಯ ಬಗ್ಗೆ ಪ್ರತಿಕ್ರಿಯಿಸುವ ಗೋಜಿಗೆ ಹೋಗಲಿಲ್ಲ. ಇಂತಹದ್ದು ಅಪಾಯಕಾರಿಯಾಗಿದೆ. ಧರ್ಮ ಧರ್ಮಗಳ ನಡುವೆ ಅಸಹಿಷ್ಣುತೆ, ಜಗಳ ಉದ್ಭವಿಸುವ ಸಂದರ್ಭದಲ್ಲಿ ಭಾವನೆಗಳನ್ನು ಕೆರಳಿಸಿ ಚೆಲ್ಲಾಟವಾಡಿ ಮತ ಗಳಿಸುವ ಪ್ರಯತ್ನ ಮಾಡುತ್ತಾರೆ. ಜನರ ಬಗ್ಗೆ ಇವರಿಗೆಷ್ಟು ಕಾಳಜಿಯಿದೆ ಎಂಬುದನ್ನು ಇದರಿಂದ ಅರ್ಥೈಸಬಹುದು. ಜನರ ಹಿತಾಸಕ್ತಿ ಗಿಂತಲೂ ಅಧಿಕಾರವೇ ಮುಖ್ಯ ವಾಗಿರುತ್ತದೆ.
ಆರೋಪಿ ಪೊನ್ನಂಡ ಪ್ರಕಾಶ್ ಕಾನೂನಿನ ಕುಣಿಕೆಯಿಂದ ತಪ್ಪಿಸದಂತೆ ಸರಕಾರ ಎಚ್ಚರ ವಹಿಸಿ ತ್ವರಿತ ಗತಿಯಲ್ಲಿ ಶಿಕ್ಷೆಯಾಗಲು ಪ್ರಯತ್ನಿಸಬೇಕು. ಆ ಕುಟುಂಬಕ್ಕೆ ಸರಕಾರ ಸರಿಯಾದ ರೀತಿಯಲ್ಲಿ ಪರಿಹಾರ ಕಲ್ಪಿಸಿಕೊಡಬೇಕೆಂದು ಅವರು ಆಗ್ರಹಿಸಿದರು.






