ಮನೆಯ ಛತ್ತು ಕುಸಿದು ಇಬ್ಬರು ಮಕ್ಕಳು ಸಾವು ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ
ಬಾಗಲಕೋಟ : ಜಿಲ್ಲೆಯ ಇಳಕಲ್ ತಾಲೂಕಿನ ಕಂದಗಲ್ಲ ಗ್ರಾಮದಲ್ಲಿ ಮನೆಯ ಛತ್ತು ಕುಸಿದು ಇಬ್ಬರು ಮಕ್ಕಳು ಮೃತಪಟ್ಟ ಘಟನೆ ಶುಕ್ರವಾರದಂದು ಮುಂಜಾನೆ ನಡೆದಿದೆ.
ಗ್ರಾಮದ 12 ವರ್ಷದ ಗೀತಾ ಈಶ್ವರಯ್ಯ ಆದಾಪೂರಮಠ ಮತ್ತು ಅವಳ ತಮ್ಮ ಹತ್ತು ವರ್ಷದ ರುದ್ರಯ್ಯ ಈಶ್ವರಯ್ಯ ಅದಾಪೂರಮಠ ಇಬ್ಬರೂ ಮನೆಯಲ್ಲಿ ಆಡುತ್ತಾ ಕುಳಿತಾಗ ಛತ್ತು ಆಕಸ್ಮಿಕವಾಗಿ ಕುಸಿದು ಬಿದ್ದಿದ್ದರಿಂದ ಇಬ್ಬರೂ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಮನೆಯಲ್ಲಿ ಅಕ್ಕ-ತಮ್ಮ ಹಾಗೂ ಅವರ ಅಜ್ಜ, ಅಜ್ಜಿ ಇದ್ದರು ಮನೆ ಬೀಳುವ ಕೆಲವೇ ಕ್ಷಣ ಮೊದಲು ಅಜ್ಜ ಮನೆಯಿಂದ ಹೊರಗಡೆ ಹೋಗಿದ್ದರು. ಅಜ್ಜಿ ಸಹ ಒಳಗಿಂದ ಹೊರಗಡೆ ಬಂದು ಕುಳಿತಿದ್ದಳು ಹೀಗಾಗಿ ಅಜ್ಜ-ಅಜ್ಜಿ ಅದೃಷ್ಟವಶಾತ್ ಪಾರಾಗಿದ್ದಾರೆ. ತಾಯಿ ಮನೆಯ ಹೊರಗಡೆ ಬಟ್ಟೆಯನ್ನು ತೊಳೆಯತಿದ್ದರು. ಮನೆಯ ಛತ್ತು ಬಿದ್ದ ತಕ್ಷಣ ಸಾರ್ವಜನಿಕರು ಮಣ್ಣನ್ನು ತೆಗೆದು ಮಕ್ಕಳನ್ನು ಹುಡುಕುವಷ್ಟರಲ್ಲಿ ಮಕ್ಕಳು ಉಸಿರುಗಟ್ಟಿ ಮೃತಪಟ್ಟಿದ್ದಾರೆ.
ಇಳಕಲ್ಲ ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಪಿಎಸ್ ಐ ಮಲ್ಲು ಸತ್ತಿಗೌಡರ ತನಿಖೆ ನಡೆಸಿದ್ದಾರೆ.ಮಕ್ಕಳ ಶವಪರೀಕ್ಷೆ ಇಳಕಲ್ಲ ಸರಕಾರಿ ಆಸ್ಪತ್ರೆಯಲ್ಲಿ ಮಾಡಲಾಯಿತು.
ಸ್ಥಳಕ್ಕೆ ತಹೀಲ್ದಾರ ಸತೀಶ ಕೂಡಲಗಿ, ಉಪವಿಭಾಧಿಕಾರಿ, ಶಾಸಕ ವಿಜಯಾನಂದ ಕಾಶಪ್ಪನವರ ಮತ್ತು ಅಧಿಕಾರಿಗಳು ಭೇಟಿ ನೀಡಿದ್ದಾರೆ. ಆಸ್ಪತ್ರೆಯ ಆವರಣದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ಕುಟುಂಬಸ್ಥರಿಗೆ ಸಾಂತ್ವನ ಪರಿಹಾರ : ಮನೆಯ ಛತ್ತು ಕುಸಿದು ಇಬ್ಬರು ಮಕ್ಕಳು ಮೃತರಾದ ಕುಟುಂಬಸ್ಥರ ಮನೆಗೆ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ ಶಾಸಕ ವಿಜಯಾನಂದ ಕಾಶಪ್ಪನವರ ಭೇಟಿ ನೀಡಿ ಸ್ವಾಂತನ ಹೇಳಿ ಮೃತಪಟ್ಟ ಮಕ್ಕಳಿಗೆ ತಲಾ ಒಬ್ಬರಿಗೆ ೫ ಲಕ್ಷ ರೂ ಪರಿಹಾರವನ್ನು ಸರಕಾರದಿಂದ ಒದಗಿಸುತ್ತೇನೆ ಎಂದು ಹೇಳಿದರು.
ಈಶ್ವರಯ್ಯ ಆದಾಪೂರಮಠರ ಮನೆಗೆ ತಹಸೀಲ್ದಾರ ಸತೀಶ್ ಕೂಡಲಗಿ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಮುರಳಿಧರ ದೇಶಪಾಂಡೆ ಮತ್ತಿತರರ ಜೊತೆಗೆ ಭೇಟಿ ಮಾಡಿ ಈಶ್ವರಯ್ಯ ಅವರಿಗೆ ಧೈರ್ಯದಿಂದ ಇರಲು ಹೇಳಿದರು. ಸರಕಾರದಿಂದ ಸಿಗಬಹುದಾದ ಎಲ್ಲಾ ರೀತಿಯ ಪರಿಹಾರವನ್ನು ಕೊಡಿಸುವ ಭರವಸೆ ನೀಡುವ ಜೊತೆಗೆ ಆದ ಘಟನೆಯ ಬಗ್ಗೆ ವಿಷಾದ ವ್ಯಕ್ತಪಡಿಸಿದರು.
ವರದಿ : ಭೀಮಣ್ಣ ಗಾಣಿಗೇರ (ಇಳಕಲ್ಲ)