ಹುನಗುಂದ ಪಟ್ಟಣದಲ್ಲಿ ಮತದಾನ ಜಾಗೃತಿ ಅಭಿಯಾನ ನಡೆಸಿದ ತಾಲೂಕಾ ಆಡಳಿತ ಮತ್ತು ಪುರಸಭೆ
ಮತದಾನ ಮಾಡುವದು ಪ್ರತಿಯೊಬ್ಬರ ಹಕ್ಕು, ನನ್ನ ಮತ ಮಾರಾಟ ಮಾಡದೆ ನಮ್ಮ ಮತ್ತು ದೇಶದ ಭವಿಷ್ಯಕ್ಕೆ ನಾವೆಲ್ಲರೂ ಮತದಾನ ಮಾಡಬೇಕೆಂದು ಸಹಾಯಕ ಚುನಾವಣಾಧಿಕಾರಿ ಶ್ರೀಧರ ಗೊಟೂರ ಹೇಳಿದರು.
ಜಿಲ್ಲಾ ಆಡಳಿತ, ಜಿಲ್ಲಾ ಸ್ವೀಪ್ ಸಮಿತಿ ಮತ್ತು ಹುನಗುಂದ ತಾಲೂಕ ಆಡಳಿತ, ತಾಲೂಕ ಸ್ವೀಪ್ ಸಮಿತಿ ಹಾಗೂ ಪುರಸಭೆ ಸಹಯೋಗದಲ್ಲಿ ಮಂಗಳವಾರ ನಡೆದ ಮತದಾನ ಜಾಗೃತಿ ಅಭಿಯಾನದ ಕರಪತ್ರ ಬಿಡುಗಡೆಗೊಳಿಸಿ ಅವರು ಮಾತನಾಡಿ ಯಾವುದೇ ಆಮಿಷಕ್ಕೆ ಜನರು ಒಳಗಾಗದೆ ಯೋಚಿಸಿ ಮತ ಹಾಕಬೇಕು. ವಿವೇಚನೆಯಿಂದ ಮತ ಹಾಕಿದರೆ ದೇಶದ ಜನರಿಗೆ ಹಿತವಾದಂತೆ, ಮತದಾನದ ಜವಾಬ್ದಾರಿಯನ್ನು ಹೆಗಲಮೇಲೆ ಹೊತ್ತರೆ ದೇಶ ತಾನಾಗಿಯೇ ಮುನ್ನಡೆಯುತ್ತದೆ ಎಂದು ತಿಳಿಸಿದರು.
ತಹಶೀಲ್ದಾರ ನಿಂಗಪ್ಪ ಬಿರಾದಾರ ಮಾತನಾಡಿ ನೆರೆಹೊರೆಯವರನ್ನು ಕರೆತಂದು ಮತದಾನ ಮಾಡಿಸುವ ಶ್ರಮದಾನದಿಂದ ನಾವು ಹೊಸ ಮನಸಿನೊಂದಿಗೆ ಸದೃಢ ದೇಶ ಕಟ್ಟೋಣ ಎಂದರು.
ಪುರಸಭೆ ಮುಖ್ಯಾಧಿಕಾರಿ ಪಿ.ಕೆ. ಗುಡದಾರಿ ಮಾತನಾಡಿ ಎಲ್ಲರೂ ಮತದಾನದ ಕೇಂದ್ರದ ಕಡೆಗೆ ಹೊರಡಿ, ಮತದಾನದ ಅವಕಾಶದ ಜಾಣ್ಮೆಯಿಂದ ಬಟನ್ ಒತ್ತುವ ಮೂಲಕ ಯೋಗ್ಯರಿಗೆ ಮತ ನೀಡೋಣ ಎಂದು ಮತದಾನದ ಪಾಠ ತಿಳಿಸಿದರು.
ಪುರಸಭೆಯಿಂದ ಜಾಗೃತಿ ಜಾಥಾವು ಪಟ್ಟಣದ ವಿಜಯ ಮಹಾಂತೇಶ ಶಾಲೆ, ಚನ್ನಮ್ಮ ವೃತ್ತ, ವಿ.ಮ.ಬ್ಯಾಂಕ್ ಮೂಲಕ ಪ್ರಮುಖ ಬೀದಿಗಳ ಮೂಲಕ ವಿಜಯ ಮಹಾಂತೇಶ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಲಾಯಿತು. ತಾಪಂ ಇಒ ತಾರಾ, ವಿಕಲಚೇತನ ಮುಖಂಡ ಸಂಗಮೇಶ ಬಾವಿಕಟ್ಟಿ, ಪುರಸಭೆಯ ಸಿಬ್ಬಂದಿಗಳಾದ ರವಿ ಹುಣಶ್ಯಾಳ, ಮಹಾಂತೇಶ ತಾರಿವಾಳ, ಬಾಬು ಲೈನ್, ರಜಾಕ ಲೈನ್ ಮತ್ತು ಹಾಗೂ ಪೌರ ಕಾರ್ಮಿಕರು ಜಾಥಾದಲ್ಲಿ ಪಾಲ್ಗೊಂಡಿದ್ದರು.