
ಏಕನಾಥ ಶಿಂದೆ ಹೇಳಿಕೆಗೆ ಸಚಿವ ಎಂ.ಬಿ.ಪಾಟೀಲ್ ತಿರುಗೇಟು
ಬೆಂಗಳೂರು: ಲೋಕಸಭೆ ಚುನಾವಣೆಯ ಬಳಿಕ ಕರ್ನಾಟಕ ಸರಕಾರ ಉರುಳಿ ಬೀಳಲಿದೆ ಎಂದು ಹೇಳಿರುವ ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ ಶಿಂದೆ ಮೊದಲು ಸಂವಿಧಾನ ಮತ್ತು ಪಕ್ಷಾಂತರ ನಿಷೇಧ ಕಾಯ್ದೆಯನ್ನು ಅರ್ಥ ಮಾಡಿಕೊಳ್ಳಲಿ ಎಂದು ಸಚಿವ ಎಂ.ಬಿ.ಪಾಟೀಲ್ ಕಟುವಾಗಿ ಪ್ರತಿಕ್ರಿಯಿಸಿದ್ದಾರೆ.
ರಾಜ್ಯದಲ್ಲಿ ನಾವು ೧೩೬ ಶಾಸಕರಿದ್ದೇವೆ. ಪಕ್ಷಾಂತರ ನಿಷೇಧ ಕಾಯ್ದೆಯಿಂದ ಪಾರಾಗಲು ನಮ್ಮ ೮೯ ಶಾಸಕರು ಬಿಜೆಪಿಗೆ ಹೋಗಬೇಕು. ಈಗ ಬೇರೆ ಪಕ್ಷಕ್ಕೆ ಹೋಗುವ ದಡ್ಡರು ಯಾರೂ ಇಲ್ಲ ಎಂದ ಅವರು, ಏಕನಾಥ ಶಿಂದೆಗೆ ಶಕ್ತಿ ಇದ್ದರೆ ನಮ್ಮ ಐದು ಶಾಸಕರನ್ನು ಮೊದಲು ತಮ್ಮತ್ತ ಸೆಳೆದುಕೊಂಡು ತೋರಿಸಲಿ. ಇನ್ನು ಒಂದೆರಡು ತಿಂಗಳಲ್ಲಿ ಆ ರಾಜ್ಯದಲ್ಲಿ ಶರದ್ ಪವಾರ್ ಮತ್ತು ಉದ್ಭವ್ ಠಾಕ್ರೆ ನೇತೃತ್ವದಲ್ಲಿ ಮಹಾವಿಕಾಸ ಆಘಾಡಿ ಮೈತ್ರಿಕೂಟದ ಸರಕಾರ ಬರಲಿದೆ ಎಂದು ಹೇಳಿದ್ದಾರೆ.
ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಲೋಕಸಭಾ ಚುನಾವಣೆ ನಂತರ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ೨೦ ಶಾಸಕರು ಕಾಂಗ್ರೆಸ್ ಸೇರಲಿದ್ದು, ಅವರೆಲ್ಲರೂ ನಮ್ಮ ಸಂಪರ್ಕದಲ್ಲಿ ಇದ್ದಾರೆ. ಸರಕಾರ ಬೀಳಿಸಲು ಇದು ಮಹಾರಾಷ್ಟವಲ್ಲ. ಜೂನ್ ಮೊದಲ ವಾರದ ನಂತರ ಶಿಂದೆ ಅವರ ಸರಕಾರವೇ ಪತನವಾಗಿ, ಅವರೇ ಮಾಜಿ ಆಗಲಿದ್ದಾರೆಂದು ಎಂದು ಹೇಳಿದರು.





