
Rajyotsava Award! ಅಕ್ಷರ ಬಾರದ ಕೈಗಳಲ್ಲಿ ಅರಳಿದ ಕೌದಿ ಕಲೆ ರುಕ್ಮಿಣಿಬಾಯಿ ವಾಷ್ಠರ್ಗೆ ರಾಜ್ಯೋತ್ಸವ ಪ್ರಶಸ್ತಿ ಗರಿ!
ಇಳಕಲ್ಲ : ಶಾಲೆಯ ಮೆಟ್ಟಿಲು ಹತ್ತದಿದ್ದರೂ ಸೂಜಿ-ದಾರದ ಚಳಕದಲ್ಲೇ ಬದುಕಿನ ಬಣ್ಣ ತುಂಬಿದ ಅಪರೂಪದ ಕರಕುಶಲ ಕಲೆಗೆ ಕೊನೆಗೂ ನಾಡಿನ ಅತ್ಯುನ್ನತ ಮನ್ನಣೆ ದೊರೆತಿದೆ.
ಇಳಕಲ್ಲ ತಾಲೂಕಿನ ಕೋಡಿಹಾಳ ಗ್ರಾಮದ ಗೋಂದಳಿ ಬುಡುಬುಡುಕಿ (ವಿಮುಕ್ತ ಬುಡಕಟ್ಟು) ಸಮುದಾಯದ ಪ್ರತಿಭೆ, ಕೌದಿ ಕಸೂತಿ ಕಲಾವಿದೆ ರುಕ್ಮಿಣಿ ಬಾಯಿ ನಾಗಪ್ಪ ವಾಷ್ಠರ್ ಅವರು ಕರ್ನಾಟಕ ಸರ್ಕಾರ ನೀಡುವ ೨೦೨೫-೨೬ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ (ಸಂಕೀರ್ಣ ವಿಭಾಗ) ಭಾಜನರಾಗಿದ್ದಾರೆ.
ಸೂಜಿ-ದಾರದಲ್ಲೇ ಬದುಕಿನ ಚಿತ್ತಾರ ಅಲೆಮಾರಿ ಹಾಗೂ ವಿಮುಕ್ತ ಬುಡಕಟ್ಟು ಜನಾಂಗವಾದ ಗೋಂದಳಿ ಬುಡುಬುಡುಕಿ ಸಮಾಜದ ರುಕ್ಮಿಣಿ ಬಾಯಿ ಅವರಿಗೆ ಅಕ್ಷರಾಭ್ಯಾಸವಿಲ್ಲ. ಯಾವುದೇ ಔಪಚಾರಿಕ ಶಿಕ್ಷಣ ಪಡೆಯದ ಇವರು, ಬಾಲ್ಯದಿಂದಲೇ ತಮ್ಮ ಕುಲವೃತ್ತಿಯಾದ ಬಣ್ಣ ಬಣ್ಣದ ಕೌದಿ (ಕೌದಿ ಹೊಲಿಯುವ) ಕಸೂತಿ ಕಲೆಯನ್ನು ಮೈಗೂಡಿಸಿಕೊಂಡವರು.
ಹಳೆಯ ಬಟ್ಟೆಗಳ ಚಿಂದಿಗಳನ್ನು ಜೋಡಿಸಿ, ಅದಕ್ಕೆ ಸೂಜಿ-ದಾರದ ಮೂಲಕ ನಾನಾ ಬಗೆಯ ಜ್ಯಾಮಿತೀಯ ಆಕಾರ, ಚಿತ್ತಾರ ಮತ್ತು ನೈಸರ್ಗಿಕ ವಿನ್ಯಾಸಗಳನ್ನು ಮೂಡಿಸುವುದರಲ್ಲಿ ಇವರು ಸಿದ್ಧಹಸ್ತರು.ನಿರಂತರ ಪರಿಶ್ರಮಕ್ಕೆ ಒಲಿದ ನಾಡಿನ ಸರ್ವೋಚ್ಛ ಗೌರವಬಾಗಲಕೋಟೆ ಜಿಲ್ಲೆಯ ಗ್ರಾಮೀಣ ಸೊಗಡಿನ ಕೌದಿ ಕಲೆಗೆ ತಮ್ಮ ಜೀವಿತಾವಧಿಯನ್ನೇ ಮುಡಿಪಾಗಿಟ್ಟಿರುವ ರುಕ್ಮಿಣಿ ಬಾಯಿ ಅವರ ಕಲಾ ನೈಪುಣ್ಯತೆಯನ್ನು ಗುರುತಿಸಿರುವ ರಾಜ್ಯ ಸರ್ಕಾರ, ೨೦೨೫-೨೬ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಯ ‘ಸಂಕೀರ್ಣ’ ವಿಭಾಗದಲ್ಲಿ ಇವರ ಹೆಸರನ್ನು ಅಧಿಕೃತವಾಗಿ ಘೋಷಿಸಿದೆ.
ಗ್ರಾಮೀಣ ಭಾಗದ ತಳಸಮುದಾಯದ ಅನಕ್ಷರಸ್ಥ ಮಹಿಳೆಯೊಬ್ಬರ ಕಲಾ ತಪಸ್ಸಿಗೆ ಈ ಪ್ರಶಸ್ತಿ ಸಂದಿರುವುದು ಇಳಕಲ್ಲ ಹಾಗೂ ಹುನಗುಂದ ಭಾಗದ ಜನರಲ್ಲಿ ತೀವ್ರ ಹರ್ಷ ತಂದಿದೆ. ಕೋಡಿಹಾಳ ಗ್ರಾಮ ಸೇರಿದಂತೆ ಸಮಗ್ರ ಬಾಗಲಕೋಟೆ ಜಿಲ್ಲೆಯ ಕಲಾಭಿಮಾನಿಗಳು ಹಾಗೂ ಸ್ಥಳೀಯರು ರುಕ್ಮಿಣಿ ಬಾಯಿ ಅವರಿಗೆ ಅಭಿನಂದನೆಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.
“ಓದು-ಬರಹ ಬಾರದ ನಮಗೆ ಸೂಜಿ-ದಾರವೇ ಸರ್ವಸ್ವ. ನಮ್ಮ ಕುಲಕಸುಬಾದ ಕೌದಿ ಹೊಲಿಯುವ ಕೆಲಸವನ್ನು ಗುರುತಿಸಿ ಸರ್ಕಾರ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿರುವುದು ನಮ್ಮ ಇಡೀ ಕುಟುಂಬಕ್ಕೆ ಮತ್ತು ನಮ್ಮ ಸಮುದಾಯಕ್ಕೆ ಅಪಾರ ಸಂತೋಷ ತಂದಿದೆ.” – ರುಕ್ಮಿಣಿಬಾಯಿ ನಾಗಪ್ಪ ವಾಷ್ಠರ್, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು.
ವರದಿ : ಭೀಮಣ್ಣ ಗಾಣಿಗೇರ





