Sri Bommalingeshwar lake ಇಲಾಳದ ಶ್ರೀ ಬೊಮ್ಮಲಿಂಗೇಶ್ವರ ಕೆರೆಗೆ ನೀರು ತುಂಬಿಸಲು ಸಚಿವ ಕಾಶಪ್ಪನವರಿಗೆ ಗ್ರಾಮಸ್ಥರ ಮನವಿ
ಇಳಕಲ್ಲ : ತಾಲೂಕಿನ ಇಲಾಳ ಗ್ರಾಮದ ಐತಿಹಾಸಿಕ “ಶ್ರೀ ಬೊಮ್ಮಲಿಂಗೇಶ್ವರ ಕೆರೆಗೆ” ನೀರು ತುಂಬಿಸಿ ಗ್ರಾಮದ ಅಂತರ್ಜಲ ಮಟ್ಟ ಹೆಚ್ಚಿಸುವಂತೆ ಒತ್ತಾಯಿಸಿ ಜಿಲ್ಲಾ ಉಸ್ತುವಾರಿ ಸಚಿವ ವಿಜಯಾನಂದ ಕಾಶಪ್ಪನವರಗೆ ಗ್ರಾಮದ ನೂರಾರು ರೈತರು ಹಾಗೂ ಮುಖಂಡರು ಮನವಿ ಸಲ್ಲಿಸಿದರು.
ನಗರದ ಸಚಿವರ ಗೃಹ ಕಚೇರಿಯಲ್ಲಿ ಬುಧವಾರ ಮನವಿ ಸಲ್ಲಿಸಿದ ಗ್ರಾಮದ ಸಂಗಯ್ಯ ವಸ್ತçದ, ಎ.ಎಸ್.ಗೌಡರ ಮಾತನಾಡಿ ಪ್ರಸಕ್ತ ಸಾಲಿನಲ್ಲಿ ತಾಲೂಕಿನಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಹಿನ್ನೆಲೆಯಲ್ಲಿ ಗ್ರಾಮದ ಕೆರೆ ಸಂಪೂರ್ಣ ಬತ್ತಿಹೋಗಿದೆ. ಕೆರೆಯಲ್ಲಿ ನೀರಿಲ್ಲದೆ ಗ್ರಾಮದ ಸುತ್ತಮುತ್ತಲಿನ ಕೃಷಿ ಬಾವಿಗಳು ಹಾಗೂ ಕೊಳವೆ ಬಾವಿಗಳಲ್ಲಿ ಅಂತರ್ಜಲ ಮಟ್ಟ ಗಣನೀಯವಾಗಿ ಕುಸಿದು ಒಣಗುತ್ತಿವೆ. ಕೃಷಿಯನ್ನೇ ಪ್ರಮುಖ ಜೀವನಾಧಾರವಾಗಿ ನಂಬಿರುವ ಇಲಾಳ ಗ್ರಾಮದಲ್ಲಿ ಜನ-ಜಾನುವಾರುಗಳಿಗೆ ಮತ್ತು ರೈತರಿಗೆ ತೀವ್ರ ನೀರಿನ ಸಮಸ್ಯೆ ಎದುರಾಗಿದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡರು.
ಈಗಾಗಲೇ ತಾಲೂಕಿನ ದಮ್ಮೂರ ಹಾಗೂ ವಡಗೇರಿ ಗ್ರಾಮಗಳ ಕೆರೆಗಳಿಗೆ ನೀರು ತುಂಬಿಸಿ ರೈತರಿಗೆ ಅನುಕೂಲ ಮಾಡಿಕೊಟ್ಟ ಮಾದರಿಯಲ್ಲೇ, ಶ್ರೀ ಬೊಮ್ಮಲಿಂಗೇಶ್ವರ ಕೆರೆಗೂ ಕಾಲುವೆ,ಪೈಪ್‌ಲೈನ್ ಮುಖಾಂತರ ತಕ್ಷಣ ನೀರು ತುಂಬಿಸಿ ರೈತರ ಹಿತ ರಕ್ಷಿಸಬೇಕು ಎಂದು ಮನವಿ ಮಾಡಿದರು.
ಪ್ರತಿಕ್ರಿಯಿಸಿದ ಸಚಿವ ವಿಜಯಾನಂದ ಕಾಶಪ್ಪನವರು ಕೆರೆ ತುಂಬಿಸುವ ಯೋಜನೆಯನ್ನು ಆದ್ಯತೆಯ ಮೇರೆಗೆ ಕೈಗೆತ್ತಿಕೊಳ್ಳಲು ಈಗಾಗಲೇ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿ ಕ್ರಮವಹಿಸಲಾಗಿದೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮದ ಸಂಗಯ್ಯ ವಸ್ತçದ, ಎ.ಎಸ್.ಗೌಡರ, ಎಸ್.ಬಿ.ಗೌಡರ, ಪರಸಪ್ಪ ಹಡಗಲಿ, ಪ್ರಕಾಶ ಕದರಮುಂಡಗಿ, ಜಗದೀಶ ಪೂಜಾರಿ, ಮಾಳಿಂಗರಾಯ ಕಂಡೇಕಾರ, ಬೊಮ್ಮಪ್ಪ ತಳವಾರ, ಮಣಿಕಂಠ ಗೋತಗಿ, ಬಸಪ್ಪ ಮಾಗಿ, ದೊಡ್ಡನಗೌಡ, ರಾಮಪ್ಪ, ಶರಣಯ್ಯ ಬನ್ನೇದ, ರಾಮಪ್ಪ ಗೋಡಿ, ಸಿದ್ದಲಿಂಗಯ್ಯ ಗೋಡಿ, ಮಂಜುನಾಥ ಹಿರೇಹಾಳ ಹಾಗೂ ಗ್ರಾಮದ ಹಿರಿಯರು,ಮುಖಂಡರು ಇದ್ದರು. ವರದಿ: ಭೀಮಣ್ಣ ಗಾಣಿಗೇರ (ಇಳಕಲ್ಲ)






