Minister Kashappanavar’s police escort team ಅಪಘಾತದಲ್ಲಿ ಗಾಯಗೊಂಡ ಸಾರಿಗೆ ನಿರ್ವಾಹಕನನ್ನು ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದ ಸಚಿವ ಕಾಶಪ್ಪನವರ ಬೆಂಗಾವಲು ಪೊಲೀಸರು
ಇಳಕಲ್: ಬೈಕ್ ಸ್ಕಿಡ್ ಆಗಿ ಅಪಘಾತಕ್ಕೀಡಾಗಿ ರಸ್ತೆಯಲ್ಲಿ ಬಿದ್ದಿದ್ದ ಸಾರಿಗೆ ಸಂಸ್ಥೆಯ ನಿರ್ವಾಹಕರೊಬ್ಬರಿಗೆ ಪ್ರಥಮ ಚಿಕಿತ್ಸೆ ನೀಡಿ, ತಮ್ಮದೇ ಇಲಾಖೆಯ ವಾಹನದಲ್ಲಿ ಆಸ್ಪತ್ರೆಗೆ ದಾಖಲಿಸುವ ಮೂಲಕ ಪೊಲೀಸ್ ಸಿಬ್ಬಂದಿ ಮಾನವೀಯತೆ ಮೆರೆದ ಘಟನೆ ಇಳಕಲ್ ಸಮೀಪದ ಚಿನ್ನಾಪುರ ಕ್ರಾಸ್ ಬಳಿ ನಡೆದಿದೆ.
ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ವಿಜಯಾನಂದ ಕಾಶಪ್ಪನವರ ಬೆಂಗಾವಲು ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿಗಳಾದ ಎ.ಎಸ್.ಐ ಗೊಡಚಯ್ಯ ಮಠಪತಿ ಹಾಗೂ ಚಾಲಕ ಗೋಪಾಲ ಹೊರಟ್ಟಿ ಅವರು ತಮ್ಮ ಕರ್ತವ್ಯ ಮುಗಿಸಿ ವಾಪಸಾಗುತ್ತಿದ್ದರು. ಈ ವೇಳೆ ಚಿನ್ನಾಪುರ ಕ್ರಾಸ್ ಬಳಿ ಇಳಕಲ್ ಕೆಎಸ್ಆರ್ಟಿಸಿ ಘಟಕದ ನಿರ್ವಾಹಕ ಮಲ್ಲಪ್ಪ ತುಪ್ಪದ ಅವರ ಬೈಕ್ ಆಯತಪ್ಪಿ ಸ್ಕಿಡ್ ಆಗಿ ಅಪಘಾತ ಸಂಭವಿಸಿತ್ತು.
ತಕ್ಷಣವೇ ವಾಹನ ನಿಲ್ಲಿಸಿದ ಪೊಲೀಸ್ ಸಿಬ್ಬಂದಿ, ಗಾಯಾಳು ಮಲ್ಲಪ್ಪ ತುಪ್ಪದ ಅವರಿಗೆ ಸ್ಥಳದಲ್ಲೇ ಪ್ರಥಮ ಚಿಕಿತ್ಸೆ ನೀಡಿದರು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ತಡಮಾಡದೆ ತಮ್ಮದೇ ಪೊಲೀಸ್ ವಾಹನದಲ್ಲಿ ಕರೆತಂದು ಇಳಕಲ್ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪೊಲೀಸರ ಈ ಸಮಯಪ್ರಜ್ಞೆ ಹಾಗೂ ಮಾನವೀಯ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ವರದಿ: ಭೀಮಣ್ಣ ಗಾಣಿಗೇರ






