
Head Constable Rekha Anehosuru ಕುಷ್ಟಗಿ ಠಾಣೆಯ ಮಹಿಳಾ ಹೆಡ್ಕಾನ್ಸ್ಟೇಬಲ್ ರೇಖಾ ಆನೆಹೊಸೂರು ಅಕಾಲಿಕ ನಿಧನ
ಇಳಕಲ್ : ಕುಷ್ಟಗಿ ಪೊಲೀಸ್ ಠಾಣೆಯ ಮಹಿಳಾ ಹೆಡ್ಕಾನ್ಸ್ಟೇಬಲ್ ರೇಖಾ ವೀರೇಶ ಕುಮಾರ ಆನೆಹೊಸೂರು (೩೩) ಅವರು ಡೆಂಘೀ ಜ್ವರದಿಂದ ಅಕಾಲಿಕ ನಿಧನರಾಗಿದ್ದಾರೆ.
ಮೂಲತಃ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಇದ್ದಲಗಿ ಗ್ರಾಮದವರಾದ ರೇಖಾ ಅವರು ೨೦೧೮ನೇ ಬ್ಯಾಚಿನ ಮಹಿಳಾ ಪೊಲೀಸ್ ಕಾನ್ಸ್ಟೇಬಲ್ ಆಗಿ ಇಲಾಖೆಗೆ ಸೇರ್ಪಡೆಯಾಗಿದ್ದರು. ಯಲಬುರ್ಗಾ ಪೊಲೀಸ್ ಠಾಣೆಯಲ್ಲಿ ಸೇವೆ ಸಲ್ಲಿಸಿದ ಬಳಿಕ, ಕಳೆದ ಒಂದೂವರೆ ವರ್ಷದಿಂದ ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು.
೭ ತಿಂಗಳ ಗರ್ಭಿಣಿಯಾಗಿದ್ದ ಹಿನ್ನೆಲೆಯಲ್ಲಿ ಹೆರಿಗೆ ರಜೆ ಪಡೆದಿದ್ದ ಅವರು, ಇಳಕಲ್ ಖಾಸಗಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಕಳೆದ ಸೋಮವಾರ ಅವರಿಗೆ ಡೆಂಘೀ ಜ್ವರ ಕಾಣಿಸಿಕೊಂಡಿದ್ದರಿAದ ವೈದ್ಯರ ಸಲಹೆಯ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಬಾಗಲಕೋಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ರಕ್ತದೊತ್ತಡ (ಬಿಪಿ) ತೀವ್ರವಾಗಿ ಕಡಿಮೆಯಾಗಿ ಆರೋಗ್ಯದಲ್ಲಿ ಏರುಪೇರಾಗಿ ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಮೃತರು ಧಾರವಾಡದಲ್ಲಿ ನಾಗರಿಕ ಪೊಲೀಸ್ ಕಾನ್ಸ್ಟೇಬಲ್ ಬುನಾದಿ ತರಬೇತಿ ಪಡೆಯುತ್ತಿರುವ ಪತಿ ವೀರೇಶ ಕುಮಾರ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಮಂಗಳವಾರ ಸ್ವಗ್ರಾಮವಾದ ಹುನಗುಂದ ತಾಲೂಕಿನ ಇದ್ದಲಗಿಯಲ್ಲಿ ನಡೆಯಲಿದೆ.
ರೇಖಾ ಆನೆಹೊಸೂರು ಅವರ ಅಕಾಲಿಕ ನಿಧನಕ್ಕೆ ಕುಷ್ಟಗಿ ಸಿಪಿಐ ವಿಶ್ವನಾಥ ಹಿರೇಗೌಡ್ರು, ಪಿಎಸ್ಐ ಹನಮಂತಪ್ಪ ತಳವಾರ ಸೇರಿದಂತೆ ಪೊಲೀಸ್ ಠಾಣೆಯ ಸಿಬ್ಬಂದಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.





