
ಇಳಕಲ್ಲ : ಹುನಗುಂದ ಮತಕ್ಷೇತ್ರದ ಶಾಸಕ ವಿಜಯಾನಂದ ಕಾಶಪ್ಪನವರಿಗೆ ಡಿ.ಕೆ.ಶಿವಕುಮಾರ ನೇತೃತ್ವದ ಸರಕಾರದಲ್ಲಿ ಸಚಿವ ಸ್ಥಾನ ನೀಡಬೇಕು ಎಂದು ಕೆಪಿಸಿಸಿ ನೇಕಾರ ವಿಭಾಗದ ರಾಜ್ಯಾಧ್ಯಕ್ಷ ವೆಂಕಟೇಶ ಸಾಕಾ ಅವರು ಪಕ್ಷದ ಹೈಕಮಾಂಡ್ಗೆ ಒತ್ತಾಯಿಸಿದ್ದಾರೆ.
ನಗರದ ತಮ್ಮ ಕಚೇರಿಯಲ್ಲಿ ರವಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿ “ಶಾಸಕ ವಿಜಯಾನಂದ ಕಾಶಪ್ಪನವರ ಅವರು ಯುವ ಹಾಗೂ ಅತ್ಯಂತ ಕ್ರಿಯಾಶೀಲ ಶಾಸಕರಾಗಿದ್ದಾರೆ. ಅವರಿಗೆ ಸಚಿವ ಸ್ಥಾನ ನೀಡಿದರೆ ಬಾಗಲಕೋಟೆ ಜಿಲ್ಲೆ ಸೇರಿದಂತೆ ಅವರ ಮತಕ್ಷೇತ್ರದಲ್ಲಿ ಹೆಚ್ಚಿನ ಅಭಿವೃದ್ಧಿ ಕೆಲಸಗಳು ಸಾಧ್ಯವಾಗಲಿವೆ” ಎಂದರು. ಕಾಂಗ್ರೆಸ್ ಪಕ್ಷದ ಗೆಲುವಿಗೆ ಶ್ರಮಿಸಿರುವ ಅವರ ಕೊಡುಗೆಯನ್ನು ಸ್ಮರಿಸಿದ ವೆಂಕಟೇಶ ಸಾಕಾ, “ಕಾಶಪ್ಪನವರ ಅವರು ಎಲ್ಲಾ ಸಮಾಜಗಳೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದಾರೆ. ಇತ್ತೀಚೆಗೆ ನಡೆದ ಉಪಚುನಾವಣೆಯಲ್ಲಿ ಮುಂಚೂಣಿಯಲ್ಲಿ ನಿಂತು ಜವಾಬ್ದಾರಿ ಹೊತ್ತು ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಪ್ರಮುಖ ಕಾರಣರಾಗಿದ್ದಾರೆ. ಪಂಚಮಸಾಲಿ ಸಮಾಜದ ಪ್ರಭಾವಿ ನಾಯಕರಾಗಿರುವ ಕಾಶಪ್ಪನವರ ಕುಟುಂಬವು ಕಳೆದ ೫೦ ವರ್ಷಗಳಿಂದಲೂ ಕಾಂಗ್ರೆಸ್ ಪಕ್ಷಕ್ಕಾಗಿ ನಿರಂತರವಾಗಿ ಶ್ರಮಿಸುತ್ತಾ ಬಂದಿದೆ. ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ಅವರಿಗೆ ತಕ್ಷಣವೇ ಸಚಿವ ಸಂಪುಟದಲ್ಲಿ ಸ್ಥಾನ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
ವರದಿ : ಭೀಮಣ್ಣ ಗಾಣಿಗೇರ





